ನೆಕರ್ ಷಾಕ್
	1732-1804. ಹಣಕಾಸು ವ್ಯವಹಾರಸ್ಥ. ರಾಜಕಾರಣಿ. ಸ್ವಿಟ್‍ಜರ್ಲೆಂಡಿನ ಜಿನೀವದಲ್ಲಿ 1732ರ ಸೆಪ್ಟೆಂಬರ್ 30ರಂದು ಜನಿಸಿದ. 16ನೆಯ ವಯಸ್ಸಿನಲ್ಲಿ ಬ್ಯಾಂಕ್ ಒಂದರಲ್ಲಿ ಗುಮಾಸ್ತೆಯಾಗಿ ಜೀವನವನ್ನಾರಂಭಿಸಿದ. 1750ರಲ್ಲಿ ಆ ಬ್ಯಾಂಕಿನ ಪ್ಯಾರಿಸಿನ ಪ್ರಧಾನ ಕಛೇರಿಗೆ ವರ್ಗಹೊಂದಿದ. ಸಟ್ಟಾ ವಹಿವಾಟಿನಲ್ಲಿ ಭಾಗವಹಿಸಿ ಶ್ರೀಮಂತ ಬ್ಯಾಂಕರನಾದ. 1768ರಲ್ಲಿ ಇವನನ್ನು ಪ್ಯಾರಿಸಿನಲ್ಲಿ ಜಿನೀವದ ಮಂತ್ರಿಯಾಗಿ ನೇಮಿಸಲಾಯಿತು. ಈತ ಫ್ರೆಂಚ್ ಈಸ್ಟ್ ಇಂಡಿಯ ಕಂಪನಿಯ ನಿರ್ದೇಶಕನಾದ. ತನ್ನ ಬ್ಯಾಂಕುವ್ಯವಹಾರದ ಹೊಣೆಯನ್ನು ತನ್ನ ಸೋದರನಿಗೆ ವಹಿಸಿಕೊಟ್ಟು ಈತ ಹಣಕಾಸು ವಿಚಾರ ಕುರಿತ ಪುಸ್ತಕ, ಲೇಖನ ಬರೆಯತೊಡಗಿದ. 1776ರಲ್ಲಿ ಇವನನ್ನು ಫ್ರೆಂಚ್ ರಾಜಬೊಕ್ಕಸದ ನಿರ್ದೇಶಕನಾಗಿ 16ನೆಯ ಲೂಯಿ ನೇಮಿಸಿದ. ಮರುವರ್ಷ ನೆಕರ್ ಹಣಕಾಸಿನ ಮಹಾನಿರ್ದೇಶಕನಾದ. ಅಮೆರಿಕನ್ ಸ್ವಾತಂತ್ರ್ಯಯುದ್ಧದಲ್ಲಿ ಫ್ರಾನ್ಸ್ ಭಾಗವಹಿಸಲು ಅಗತ್ಯವಾದ ಹಣವನ್ನೆತ್ತಲು ಈತ ಪ್ರಚಾರಮಾಡಿದ. ಆದರೆ ಹಣದ ಮುಗ್ಗಟ್ಟು ಸಂಭವಿಸಿತು. ನೆಕರ್ ರಾಜೀನಾಮೆ ಕೊಡಬೇಕಾಯಿತು. ನಿವೃತ್ತ ಜೀವನದ ಅವಧಿಯಲ್ಲಿ ಇವನು ತನ್ನ ನೀತಿಯನ್ನು ಸಮರ್ಥಿಸಿ ಗ್ರಂಥವೊಂದನ್ನು ಬರೆದ (1784). 1788ರಲ್ಲಿ ಇವನನ್ನು ಮತ್ತೆ ಬರಮಾಡಿಕೊಂಡು ಹಣಕಾಸು ಮಂತ್ರಿಯಾಗಿ ನೇಮಿಸಲಾಯಿತು. ಆಗ ಫ್ರಾನ್ಸ್ ದಿವಾಳಿಯೇಳುವ ಸ್ಥಿತಿಯಲ್ಲಿತ್ತು. ನೆಕರ್ ಸಾಮಾಜಿಕ ಸಂವೈಧಾನಿಕ ಸುಧಾರಣೆಗಳ ಕಾರ್ಯಕ್ರಮವೊಂದನ್ನು ಸೂಚಿಸಿದ. (1789). ಇವನು ಈ ಸೂಚನೆಯನ್ನು ಪಾದ್ರಿಗಳು, ಶ್ರೀಮಂತರು ಮತ್ತು ಸಾಮಾನ್ಯರ ಪ್ರತಿನಿಧಿಗಳಿಂದ ಕೂಡಿದ ಸ್ಟೇಟ್ಸ್ ಜನರಲ್ ಸಭೆಯ ಮುಂದಿಟ್ಟ. ಆದರೆ ಅವರು ಇದನ್ನು ವಿರೋಧಿಸಿದರು. 1789ರ ಜುಲೈ 11 ರಂದು ನೆಕರನನ್ನು ವಜಾಮಾಡಲಾಯಿತು. ಈತ ಸ್ವಿಟ್‍ಜರ್‍ಲೆಂಡಿಗೆ ಹೋದ. ಮತ್ತೆ ಅಧಿಕಾರ ವಹಿಸಬೇಕೆಂದು ಜುಲೈ 20 ರಂದು ಇವನಿಗೆ ಆಹ್ವಾನ ಬಂತು. 1790ರ ಸೆಪ್ಟೆಂಬರಿನಲ್ಲಿ ಈತ ಅಂತಿಮವಾಗಿ ರಾಜೀನಾಮೆ ನೀಡಿದ. ನೆಕರ್ 1804ರ ಎಪ್ರಿಲ್ 9 ರಂದು ತೀರಿಕೊಂಡ.
(ಎಸ್.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ